ಬೆಂಗಳೂರು: ಪೊಲೀಸ್ ಕಾನ್ಸ್ಟೇಬಲ್ ಹುದ್ದೆ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್.. ರಾಜ್ಯದಲ್ಲಿ ಪೊಲೀಸ್ ಪೇದೆ ಹುದ್ದೆಗಳ ನೇಮಕಾತಿ ವಯೋಮಿತಿಯನ್ನು ಸಡಿಲಿಸುವ (PC Age Relaxation) ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ಆರಂಭಿಸಿದೆ.
ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರ ನೇತೃತ್ವದಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಪ್ರಸ್ತುತ ನಿಗದಿ ಪಡಿಸಿರುವ ಕನಿಷ್ಠ ಮತ್ತು ಗರಿಷ್ಠ ವಯೋಮಿತಿ ಎರಡರಲ್ಲೂ ಸಡಿಲಿಕೆ ಮಾಡಿ ಪ್ರಸ್ತಾವನೆಯನ್ನು ಶೀಘ್ರದಲ್ಲೇ ಸರ್ಕಾರಕ್ಕೆ ಸಲ್ಲಿಸುವಂತೆ ಪರಮೇಶ್ವರ್ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
PC Age Relaxation: ಗರಿಷ್ಠ ವಯೋಮಿತಿ 27 ರಿಂದ 30 ವರ್ಷ?:
ಪ್ರಸ್ತುತ ಕನಿಷ್ಠ ವಯೋಮಿತಿ 19 ವರ್ಷವಾಗಿದ್ದು, ಇದನ್ನು 18 ವರ್ಷಕ್ಕೆ ಇಳಿಸುವ ಬಗ್ಗೆ ಚರ್ಚೆ ನಡೆದಿದೆ. ಹಾಗೆಯೇ ಗರಿಷ್ಠ ವಯೋಮಿತಿಯನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 25 ರಿಂದ 27 ವರ್ಷಗಳಿಗೆ ಹಾಗೂ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ/ಪಂಗಡ ಸಮುದಾಯದವರಿಗೆ 27 ರಿಂದ 30 ವರ್ಷಗಳಿಗೆ ಹೆಚ್ಚಿಸುವ ಚಿಂತನೆ ನಡೆದಿದೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಪೊಲೀಸ್ ಕಾನ್ಸ್ಟೇಬಲ್ ಹುದ್ದೆ ನೇಮಕಾತಿಯ ವಯೋಮಿತಿ ಸಡಿಲಿಕೆ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಡಿಜಿಐಜಿ ಎಂ.ಎ.ಸಲೀಂ ಅವರಿಗೆ ಸೂಚನೆ ನೀಡಿದ್ದಾರೆ.
ದಸರಾಕ್ಕೆ ಮೊದಲು ಪ್ರಸ್ತಾವನೆ?:
ಮೂಲಗಳ ಪ್ರಕಾರ, ದಸರಾ ಹಬ್ಬಕ್ಕೂ ಮುನ್ನವೇ ಈ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆಯಾಗುವ ಸಾಧ್ಯತೆ ಇದೆ. ಸಚಿವ ಸಂಪುಟ ಅನುಮೋದನೆ ಪಡೆದ ನಂತರ, ಕರ್ನಾಟಕ ಪೊಲೀಸ್ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿ ವಯೋಮಿತಿ ಸಡಿಲಿಕೆ ಜಾರಿಗೆ ತರಲಾಗುವುದು.
ಇತರ ರಾಜ್ಯಗಳ ಮಾದರಿ:
ತಮಿಳುನಾಡು, ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಪೇದೆ ಹುದ್ದೆ ನೇಮಕಾತಿಗೆ ಕನಿಷ್ಠ ವಯೋಮಿತಿ 18 ವರ್ಷವಾಗಿದೆ. ಕರ್ನಾಟಕದಲ್ಲಿಯೂ ಅದೇ ಮಾದರಿಯನ್ನು ಅನುಸರಿಸಲು ಸರ್ಕಾರ ಮುಂದಾಗಿದೆ.
8 ಸಾವಿರ ಹುದ್ದೆಗಳು ಖಾಲಿ:
ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 8 ಸಾವಿರಕ್ಕೂ ಹೆಚ್ಚು ಪೊಲೀಸ್ ಪೇದೆ ಹುದ್ದೆಗಳು ಖಾಲಿ ಇದ್ದು, ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಸರ್ಕಾರ ಸಜ್ಜಾಗಿದೆ. ವಯೋಮಿತಿ ಸಡಿಲಿಕೆಯ ಆದೇಶ ಹೊರಬಿದ್ದ ಬಳಿಕ ಹೊಸ ನೇಮಕಾತಿ ಅಧಿಸೂಚನೆ ಹೊರಬೀಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಳೆಯ ಬೇಡಿಕೆ ಇದೀಗ ಸಕಾರ:
ಪೇದೆ ಹುದ್ದೆಯ ವಯೋಮಿತಿ ಇಳಿಕೆ ಹಾಗೂ ಗರಿಷ್ಠ ವಯೋಮಿತಿ ಹೆಚ್ಚಳ ಹಲವು ವರ್ಷಗಳ ಯುವಕರ ಬೇಡಿಕೆಯಾಗಿತ್ತು. ಇದೇ ಬೇಡಿಕೆಯನ್ನು ಸಿಎಂ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗಲೇ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಕೇಳಿದ್ದರು. ಇದೀಗ ಅವರು ಮುಖ್ಯಮಂತ್ರಿಯಾದ ನಂತರ ಈ ವಿಚಾರ ಮತ್ತೆ ಚರ್ಚೆಗೆ ಬಂದಿದೆ.
ಗೃಹ ಸಚಿವ ಡಾ. ಜಿ ಪರಮೇಶ್ವರ ಅವರಿಂದ ಸ್ಪಷ್ಟನೆ:
“ಪೊಲೀಸ್ ಪೇದೆ ಹುದ್ದೆಗಳ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಬೇರೆ ರಾಜ್ಯಗಳಲ್ಲಿ ಪೊಲೀಸ್ ನೇಮಕಾತಿಗೆ ವಯೋಮಿತಿ ಎಷ್ಟಿದೆ ಎಂಬುದನ್ನು ಪರಿಶೀಲನೆ ಮಾಡುತ್ತಿದ್ದೇವೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ಕೊಟ್ಟಿದ್ದೇನೆ. ಪ್ರಸ್ತಾವನೆ ಬಂದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಅವರು ಸ್ಪಷ್ಟನೆ ನೀಡಿದ್ದಾರೆ.
2000ಕ್ಕೂ ಹೆಚ್ಚು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಶೀಘ್ರದಲ್ಲೇ ಆರಂಭ
CIBIL Score: ಗುಡ್ ನ್ಯೂಸ್; ಸಿಬಿಲ್ ಸ್ಕೋರ್ ಇಲ್ಲದೆಯೂ ಸಾಲ ಪಡೆಯಬಹುದು





