ಬೆಂಗಳೂರು: ರೈತರು ಮತ್ತು ಕನ್ನಡಪರ ಹೋರಾಟಗಾರರ ವಿರುದ್ಧ ದಾಖಲಿಸಲಾಗಿದ್ದ 60 ಪ್ರಕರಣಗಳನ್ನು (Police Case) ವಾಪಸ್ ಪಡೆಯಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಮತ್ತು ಕನ್ನಡಪರ ಹೋರಾಟಗಾರರ ಹಿತದೃಷ್ಠಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಮೆಟ್ರೋ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಮೆಟ್ರೋ ಹಂತ-3 ಅಡಿಯಲ್ಲಿ ಜೆ.ಪಿ.ನಗರ 4ನೇ ಹಂತದಿಂದ ಹೆಬ್ಬಾಳದವರೆಗೆ, ಹೊಸಹಳ್ಳಿಯಿಂದ ಮಾಗಡಿ ರಸ್ತೆ ಮೂಲಕ ಕಡಬಗೆರೆವರೆಗೆ 37.121 ಕಿ.ಮೀ. ಉದ್ದದ ಡಬಲ್ ಡೆಕ್ಕರ್ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಶುಲ್ಕದಲ್ಲೂ ಸಣ್ಣ ಬದಲಾವಣೆ ಮಾಡಲಾಗಿದೆ. ಮಾರುಕಟ್ಟೆ ಶುಲ್ಕವನ್ನು 41 ಪೈಸೆಯಿಂದ 42 ಪೈಸೆಗೆ ಹೆಚ್ಚಿಸಲಾಗಿದೆ. ವಹಿವಾಟು ವೆಚ್ಚವನ್ನು 0.01 ಪೈಸೆಗೆ ಹೆಚ್ಚಿಸುವುದಕ್ಕೂ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಇದೇ ವೇಳೆ, ಆಶಾಕಿರಣ ಯೋಜನೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳಲಿದೆ. ಕಣ್ಣಿನ ಉಚಿತ ತಪಾಸಣೆ ಮತ್ತು ಅಂಧತ್ವ ನಿವಾರಣೆಯ ಗುರಿ ಹೊಂದಿರುವ ಈ ಯೋಜನೆಗೆ 52.85 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.
ಅದರ ಜೊತೆಗೆ, ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲ್ಲೂಕಿನ ರಾಯಸಂದ್ರ ಗ್ರಾಮದಲ್ಲಿ ಹೊಸ ಮೆಡಿಕಲ್ ಕಾಲೇಜು ಸ್ಥಾಪನೆಗೂ ಅನುಮೋದನೆ ದೊರಕಿದೆ. ಈ ಹಿನ್ನೆಲೆಯಲ್ಲಿ, ಕರ್ನಾಟಕ ಗೃಹ ಮಂಡಳಿಯಿಂದ 25 ಎಕರೆ ಜಮೀನು 65 ಕೋಟಿ ರೂ. ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಸಚಿವ ಹೆಚ್.ಕೆ. ಪಾಟೀಲ್ ಮಾಹಿತಿ ನೀಡಿದರು.
CIBIL Score: ಗುಡ್ ನ್ಯೂಸ್; ಸಿಬಿಲ್ ಸ್ಕೋರ್ ಇಲ್ಲದೆಯೂ ಸಾಲ ಪಡೆಯಬಹುದು
PM SVANidhi Scheme: ಪಿಎಂ ಸ್ವನಿಧಿ ಯೋಜನೆ ಅವಧಿ ವಿಸ್ತರಣೆ 50,000 ರೂ.ವರೆಗೆ ಸಾಲ ಸೌಲಭ್ಯ