ನವದೆಹಲಿ: ಮೊದಲ ಬಾರಿಗೆ ಸಾಲಕ್ಕೆ ಅರ್ಜಿ ಸಲ್ಲಿಸುವವರನ್ನು “ಸಿಬಿಲ್ ಸ್ಕೋರ್ ಇಲ್ಲ” ಎಂಬ ಒಂದೇ ಕಾರಣಕ್ಕೆ ಬ್ಯಾಂಕುಗಳು ಅವರು ಅರ್ಜಿಗಳನ್ನು ನಿರಾಕರಿಸಬಾರದು ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
ಸಂಸತ್ ಮಳೆಗಾಲದ ಅಧಿವೇಶನದಲ್ಲಿ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಲೋಕಸಭೆಯಲ್ಲಿ ಉತ್ತರಿಸಿದ್ದು, “ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಈಗಾಗಲೇ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಸೂಚನೆ ನೀಡಿದೆ. ಹೊಸ ಸಾಲಗಾರರ ಅರ್ಜಿಗಳನ್ನು ಕ್ರೆಡಿಟ್ ಇತಿಹಾಸವಿಲ್ಲ ಎಂಬ ಕಾರಣಕ್ಕೆ ಮಾತ್ರ ತಿರಸ್ಕರಿಸಬಾರದು” ಎಂದು ಅವರು ಹೇಳಿದರು.
“ಮೊದಲ ಬಾರಿಗೆ ಸಾಲ ಪಡೆಯುವವರಿಗೆ ನಿರ್ದಿಷ್ಟ ಸಿಬಿಲ್ ಸ್ಕೋರ್ ಕಡ್ಡಾಯವಲ್ಲ. ಸಾಲ ನೀಡುವ ಸಂಸ್ಥೆಗಳು ತಮ್ಮ ಬೋರ್ಡ್ ಅನುಮೋದಿತ ನೀತಿ ಮತ್ತು ನಿಯಮಾವಳಿ ಆಧಾರದ ಮೇಲೆ ತೀರ್ಮಾನ ಕೈಗೊಳ್ಳುತ್ತವೆ. ಕ್ರೆಡಿಟ್ ವರದಿ ಒಂದು ಅಂಶ ಮಾತ್ರ,” ಎಂದು ಚೌಧರಿ ವಿವರಿಸಿದರು.
ಸಿಬಿಲ್ ಸ್ಕೋರ್ ಎಂದರೇನು?
ಸಿಬಿಲ್ ಸ್ಕೋರ್ ಎನ್ನುವುದು 300 ರಿಂದ 900 ರವರೆಗಿನ ಮೂರು ಅಂಕಿಯ ಸಂಖ್ಯೆ. ಇದು ವ್ಯಕ್ತಿಯ ಹಳೆಯ ಸಾಲದ ಮರುಪಾವತಿ ಇತಿಹಾಸ, ಬಾಕಿ ಸಾಲಗಳು ಮತ್ತು ಹಣಕಾಸಿನ ಶಿಸ್ತಿನ ಆಧಾರದ ಮೇಲೆ ಲೆಕ್ಕ ಹಾಕಲ್ಪಡುತ್ತದೆ, ಒಟ್ಟಾರೆ ಇದು ಕ್ರೆಡಿಟ್ ಅರ್ಹತೆ ಮತ್ತು ಮರುಪಾವತಿ ನಡವಳಿಕೆಯನ್ನು ತೋರಿಸುತ್ತದೆ.
ಬ್ಯಾಂಕುಗಳು ಸಾಮಾನ್ಯವಾಗಿ ಇದನ್ನು ಸಾಲ ಅರ್ಹತೆಯನ್ನು ಪರಿಶೀಲಿಸಲು ಬಳಸುತ್ತವೆ. ಆದಾಗ್ಯೂ, ಕ್ರೆಡಿಟ್ ಸ್ಕೋರ್ (Credit Score) ಇಲ್ಲ ಎಂಬುದೇ ಕಾರಣಕ್ಕೆ ಮೊದಲ ಬಾರಿಗೆ ಸಾಲಗಾರರನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಇಲಾಖೆ ಸ್ಪಷ್ಟನೆ ನೀಡಿದೆ.
Free CIBIL Score:
ಕ್ರೆಡಿಟ್ ಮಾಹಿತಿ ಸಂಸ್ಥೆಗಳು (CICs) ವ್ಯಕ್ತಿಗಳಿಗೆ ಕ್ರೆಡಿಟ್ ವರದಿ ನೀಡಲು ಗರಿಷ್ಠ ₹100 ವರೆಗೆ ಮಾತ್ರ ಶುಲ್ಕ ವಿಧಿಸಬಹುದು. ಜೊತೆಗೆ, ಕ್ರೆಡಿಟ್ ಮಾಹಿತಿ ಸಂಸ್ಥೆಗಳು ಪ್ರತಿಯೊಬ್ಬರಿಗೆ ಪ್ರತಿ ವರ್ಷ ಒಂದು ಬಾರಿ ಉಚಿತ ಕ್ರೆಡಿಟ್ ಸ್ಕೋರ್ (Credit Score) ನೀಡಬೇಕು ಎಂಬ RBI ನಿಯಮವಿದೆ.